Tuesday, October 22, 2024

KUD ಕುಲಪತಿಯಾಗಿ ಆಯ್ಕೆಯಾದ ಡಾ.ಬಿ.ಎಂ.ಪಾಟೀಲ್ ರವರಿಗೆ ಹೃತ್ಪೂರ್ವಕ ಅಭಿನಂದನೆಗಳು

ಹೃತ್ಪೂರ್ವಕ ಅಭಿನಂದನೆಗಳು

ಜಗತ್ತಿನ ಅತ್ಯಂತ ಪುರಾತನ ಕ್ರೀಡೆ ಕುಸ್ತಿಯು ಒಂದು ಸಮರ ಕಲೆ ಮತ್ತು ಯುದ್ಧ ಕ್ರೀಡೆಯಾಗಿದ್ದು, ಇಂತಹ ಸಮರ ಕಲೆಯಲ್ಲಿ ಸೈ ಎನಿಸಿಕೊಂಡು, ಕುಸ್ತಿಪಟುವಾಗಿ ಸಾಧನೆಯ ಶಿಖರವೇರಿರುವ ಡಾ.ಬಿ.ಎಂ.ಪಾಟೀಲ್ ರವರು, ಸುಮಾರು 25 ಸಂವತ್ಸರಗಳನ್ನು ಪೂರೈಸಿರುವ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಅತ್ಯುನ್ನತ ಹುದ್ದೆಯಾದ ಉಪಕುಲಪತಿ ಪದವಿಯನ್ನು ಅಲಂಕರಿಸುವ ಮೂಲಕ ಕರುನಾಡಿನ ಇತಿಹಾಸದಲ್ಲೆ ಪ್ರಪ್ರಥಮ ಬಾರಿಗೆ ಹೊಸ ಅಧ್ಯಾಯಕ್ಕೆ ನಾಂದಿಹಾಡಿದ್ದು ಹೆಮ್ಮೆಯ ಸಂಗತಿಯಾಗಿದೆ. 

ದೈಹಿಕ ಶಿಕ್ಷಣ ನಿರ್ದೇಶಕರು, ಶಿಕ್ಷಕರ ತರಬೇತಿ ವಿಭಾಗದ ಡೀನ್ ಆಗಿ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದು, ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಅತ್ಯುನ್ನತ ಹುದ್ದೆಯು ತಮ್ಮನ್ನು ಅರಸಿಕೊಂಡು ಬಂದಿರುವುದು ಶಿಕ್ಷಣ ಕ್ಷೇತ್ರದ ಭಾಗ್ಯದ ಬಾಗಿಲು ತೆರೆದಂತಾಗಿದೆ.   

ಈ ಸಾಧನೆಯು ನಿಮ್ಮ ಶ್ರಮ, ನಿಷ್ಠೆ ಮತ್ತು ಶ್ರೇಷ್ಠತೆಯ ಪ್ರತೀಕವಾಗಿದೆ. ನೀವು ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಮತ್ತು ಅಧ್ಯಾಪಕರಿಗೆ ಇಷ್ಟು ವರ್ಷಗಳಿಂದ ಸಲ್ಲಿಸಿದ ಸೇವೆ, ನೀಡಿದ ಮಾರ್ಗದರ್ಶನ ಮತ್ತು ಸಹಕಾರ ಸದಾ ಶ್ಲಾಘನೀಯ. ಶೈಕ್ಷಣಿಕ ಕ್ಷೇತ್ರದಲ್ಲಿ, ವಿಶೇಷವಾಗಿ ಕ್ರೀಡೆ ಮತ್ತು ಕ್ರೀಡಾ ಸಂಶೋಧನೆಯಲ್ಲಿ ನೀವು ತೋರಿಸಿದ ವಿಶಿಷ್ಠ ಪ್ರತಿಭೆ, ಈ ಅತ್ಯುನ್ನತ ಪಾತ್ರದಲ್ಲಿ ಇನ್ನಷ್ಟು ಸಮೃದ್ಧಿಯನ್ನು ಹೊಂದುವುದು ಸೂರ್ಯ-ಚಂದ್ರರಷ್ಟೆ ನಿಶ್ಚಿತ.

ನೀವು ಉತ್ತಮ ಮತ್ತು ಸಮಗ್ರ ವಿದ್ಯಾ ವಿಕಾಸಕ್ಕಾಗಿ ಕೈಗೊಂಡ ನಿರ್ಧಾರಗಳು, ವಿದ್ಯಾರ್ಥಿ ಕಲಿಕೆಗೆ ಹಾಗೂ ಸರ್ವಾಂಗೀಣ ಪ್ರಗತಿಗೆ ಉತ್ತೇಜನ ನೀಡುವುದು ಹಾಗೂ ವಿದ್ಯಾರ್ಥಿ ಸಮುದಾಯ ಸೇವೆಯಲ್ಲಿ ನಿಮ್ಮ ನಿಷ್ಠೆ ಸಮಾಜದಲ್ಲಿ ಚಿರಸ್ಥಾಯಿಯಾಗಿ ಉಳಿಯಲಿದೆ. ನಿಮ್ಮ ನಾಯಕತ್ವದಲ್ಲಿ, ವಿಶ್ವವಿದ್ಯಾಲಯವು ಉತ್ತಮ ಶಿಕ್ಷಣ ಮತ್ತು ಸಂಶೋಧನೆಯ  ಕೇಂದ್ರವಾಗಿ, ಉಚ್ಛಾçಯ ಸ್ಥಾನವನ್ನು ಅಲಂಕರಿಸಲೆನ್ನುವುದು ನಮ್ಮೆಲ್ಲರ ಅಭೀಲಾಷೆಯಾಗಿದೆ.  .




ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದ ಉಪಕುಲಪತಿ ಹುದ್ದೆಯನ್ನು ಅಲಂಕರಿಸಿದ ನೀವು, ನಿಮ್ಮ ಯೋಜಿತ ಕಾರ್ಯಗಳು ಮತ್ತು ಸಂಕಲ್ಪಗಳು ನಿಮ್ಮ ಅಧಿಕಾರಾವಧಿಯಲ್ಲಿ ಸುಸಂಪನ್ನಗೊಳ್ಳಲಿ ತನ್ಮೂಲಕ ವಿದ್ಯಾರ್ಥಿ ಹಾಗೂ ಶಿಕ್ಷಕ ಸಮೂಹವನ್ನು ಹೊಸ ಸಾಧನೆಯೇಡೆಗೆ ಪ್ರೇರೇಪಿಸಲಿ ಎಂದು ಆಶಿಸುತ್ತ, ತಮಗೆ ತುಂಬು ಹೃದಯದ ಅಭಿನಂದನೆಗಳು.

ಭಟ್ಕಳ ಎಜುಕೇಶನ್ ಟ್ರಸ್ಟ್(ರಿ), ಭಟ್ಕಳ 
ವಿದ್ಯಾರ್ಥಿಗಳು, ಪ್ರಾಂಶುಪಾಲರು, ಪ್ರಾಧ್ಯಾಪಕರು ಹಾಗೂ ದೈಹಿಕ ಶಿಕ್ಷಕರು, ಶ್ರೀ ಗುರು ಸುಧೀಂದ್ರ ಕಾಲೇಜು, ಭಟ್ಕಳ 

ಹೃತ್ಪೂರ್ವಕ ಅಭಿನಂದನೆಗಳು

No comments:

Post a Comment