Tuesday, July 29, 2025

ಭಟ್ಕಳದಲ್ಲಿ ಪತ್ರಿಕಾ ದಿನಾಚರಣೆ

ಭಟ್ಕಳ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಜು.29 ರಂದು ಬೆಳಗ್ಗೆ 10.30ಕ್ಕೆ ಸಾಗರ ರಸ್ತೆಯ ಅಯೋಧ್ಯಾ ನಗರದಲ್ಲಿರುವ ನ್ಯೂ ಇಂಗ್ಲಿಷ್ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆ ಜರುಗಿತು. 

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಿ. ಗಿರೀಶ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಎಂ.ಆರ್. ಮಾನ್ವಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ರಾಷ್ಟ್ರೀಯ ಸಮಿತಿ ಸದಸ್ಯ ಅರುಣಕುಮಾ‌ರ್ ಶಿರೂರು ರವರು ಪತ್ರಿಕೋದ್ಯಮದ ಕುರಿತು ಉಪನ್ಯಾಸ ನೀಡಿದರು. ಸಂಘದ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಹಾಗೂ ರಾಷ್ಟ್ರೀಯ, ರಾಜ್ಯ ಸಮಿತಿಯ ಮಾಜಿ ಸದಸ್ಯ ರಾಧಾಕೃಷ್ಣ ಭಟ್ಟ ಉಪಸ್ಥಿತರಿದ್ದರು. 

ಕಾರ್ಯಕ್ರಮದಲ್ಲಿ ಸಮಾಜ ಸೇವಕ ಮೌಲಾನಾ ಎಸ್‌. ಎಂ. ಜುಬೇರ್ ಭಟ್ಕಳ ಹಾಗೂ ಸಾಮಾಜಿಕ ಹೋರಾಟಗಾರ ರಾಮಾ ಎಂ. ಮೊಗೇರ ಅಳ್ವೆಕೋಡಿ ಅವರನ್ನು ಸನ್ಮಾನಿಸಲಾಯಿತು. ಪತ್ರಿಕಾ ವಿತರಕರಾದ  ಫ್ರಾನ್ಸಿಸ್ ಡಿಸೋಜಾ ಮತ್ತು ಉತ್ತಮ ಶೈಕ್ಷಣಿಕ ಸಾಧನೆ ಮಾಡಿದ ಸುಜನ್ ಮನಮೋಹನ ನಾಯ್ಕ, ಕರಾಟೆಯಲ್ಲಿ ಉತ್ತಮ ಸಾಧನೆ ಮಾಡಿದ ಪ್ರಣವಿ ರಾಮಚಂದ್ರ ಕಿಣಿ ಅವರನ್ನು ಗೌರವಿಸಲಾಯಿತು.

ಶ್ರೀ ಗುರು ಸುಧೀಂದ್ರ ಪದವಿ ಕಾಲೇಜಿನ ಬಿಎ ವಿಭಾಗದ ಪತ್ರಿಕೋದ್ಯಮ ವಿಷಯದ ಉಪನ್ಯಾಸಕರಾದ ಶ್ರೀ ಕ್ರಷ್ಣ ಮೊಗೇರ, ಶ್ರೀ ದೇವೇಂದ್ರ ಕಿಣಿ ಹಾಗು  ಪತ್ರಿಕೋದ್ಯಮ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Friday, July 11, 2025

ಪದವಿ ಪರೀಕ್ಷೆಯಲ್ಲಿ ಶ್ರೀ ಗುರು ಸುಧೀಂದ್ರ ಕಾಲೇಜಿಗೆ ಉತ್ತಮ ಫಲಿತಾಂಶ

 


ಭಟ್ಕಳ : ಕರ್ನಾಟಕ ವಿಶ್ವವಿದ್ಯಾನಿಲಯವು ಕಳೆದ ಜನವರಿ ತಿಂಗಳಲ್ಲಿ ಜರುಗಿಸಿದ 2024-25 ನೇ ಸಾಲಿನ 5ನೇ ಸೆಮಿಸ್ಟರ್ ಪದವಿ ಪರೀಕ್ಷೆಯಲ್ಲಿ ತಾಲೂಕಿನ ಶ್ರೀ ಗುರು ಸುಧೀಂದ್ರ ಕಾಲೇಜಿಗೆ 90% ಫಲಿತಾಂಶ ಬಂದಿರುತ್ತದೆ. 

ಬಿಸಿಏ ವಿಭಾಗದಲ್ಲಿ ವಿದ್ಯಾ ನಾಯ್ಕ್ 9.29, ಬಿಕಾಂ ವಿಭಾಗದಲ್ಲಿ ಮಹಾಲಕ್ಷ್ಮೀ ಕಾಮತ 9.75, ಬಿಬಿಏ ವಿಭಾಗದಲ್ಲಿ ಶ್ರೀನಿಧಿ ಪೈ 9.25 ಹಾಗು ಬಿಏ ವಿಭಾಗದಲ್ಲಿ ಅಕ್ಷತಾ ನಾಯ್ಕ್ 9.42 ಸಿಜಿಪಿಏ ಅಂಕಗಳಿಸಿರುತ್ತಾರೆ.
ಸದರಿ ಪರೀಕ್ಷೆಯಲ್ಲಿ ಬಿಸಿಏ ವಿಭಾಗದಲ್ಲಿ 95 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಹಾಗೂ 15 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, ಬಿ.ಕಾಂ ವಿಭಾಗದಲ್ಲಿ 76 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಹಾಗೂ 25 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, ಬಿಬಿಏ ವಿಭಾಗಲ್ಲಿ 25 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಹಾಗೂ 5 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, ಮತ್ತು ಬಿಏ ವಿಭಾಗದಲ್ಲಿ 16 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಹಾಗೂ 1 ವಿದ್ಯಾರ್ಥಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಂಡಿರುತ್ತಾರೆ. ಇದರೊಂದಿಗೆ ಹತ್ತಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳಿಸಿರುತ್ತಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಭಟ್ಕಳ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುರೇಶ ವಿ ನಾಯಕ್, ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲ ಶ್ರೀನಾಥ್ ಪೈ, ವಿವಿಧ ವಿಭಾಗಗಳ ಉಪ ಪ್ರಾಂಶುಪಾಲರು, ಬೋಧಕ-ಬೋಧಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿರುತ್ತಾರೆ.


Thursday, July 10, 2025

ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಗುರು ನಮನ - "ಭಾರತೀಯ ಜ್ಞಾನ ವ್ಯವಸ್ಥೆಗೆ ಪೂರಕವಾದ ಸಂಗೀತ | ಸಾಹಿತ್ಯ | ಸಂಸ್ಕ್ರತಿಯ ಕುರಿತ ಪುಸ್ತಕಗಳ ಅನಾವರಣ"

ಭಟ್ಕಳ: ಗುರು ಪುರ್ಣಿಮೆ- 2025 ರ ಅಂಗವಾಗಿ ಜುಲೈ ತಿಂಗಳ ಆ‌ಷಾಢ ಮಾಸದ ಪುರ್ಣಿಮೆಯಂದು ಭಟ್ಕಳದ ಭಟ್ಕಳ ಎಜ್ಯುಕೇಶನ ಟ್ರಸ್ಟ್ ನ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಶ್ರೀ ಗುರುಗಳಿಗೆ ನಮನ ಸಲ್ಲಿಸಲಾಯಿತು.



ಅಧ್ಯಕ್ಷರಾದ ಡಾ.ಸುರೇಶ ನಾಯಕ ರವರು ಶ್ರೀ ಸಂಸ್ಥಾನ ಕಾಶೀಮಠದ ೨೦ನೇ ಯತಿವರ್ಯರಾದ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರಿಗೆ ಪುಷ್ಪ ನಮನ ಸಲ್ಲಿಸಿ "ಭಾರತೀಯ ಜ್ಞಾನ ವ್ಯವಸ್ಥೆಗೆ Indian Knowledge System - IKS ಪೂರಕವಾದ ಸಂಗೀತ | ಸಾಹಿತ್ಯ | ಸಂಸ್ಕ್ರತಿಯ ಕುರಿತ ಪುಸ್ತಕಗಳ ಅನಾವರಣ" ವನ್ನು ನೆರವೇರಿಸಿದರು.  

ಈ ಸಂದರ್ಭದಲ್ಲಿ ಭಟ್ಕಳ ಎಜ್ಯುಕೇಶನ ಟ್ರಸ್ಟ್ ಅಧ್ಯಕ್ಷರು ಮಾತನಾಡಿ ಶ್ರೀಗಳ ಆಶೀರ್ವಾದದಿಂದ ಕಾಲೇಜು ಅಭಿವೃದ್ಧಿಯನ್ನು ಕಾಣುತ್ತಿದೆ ಎಂದು ಗುರುಗಳನ್ನು ಸ್ಮರಿಸಿದರು. 

ಕಾಲೇಜಿನ ಇನ್ಫೋಸಿಸ್ ಫೌಂಡೇಶನ್ ಬ್ಲಾಕ್ ನ T. VIMALA V. PAI E-LIBRARY ಯಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರು, ಉಪ-ಪ್ರಾಂಶುಪಾಲರು, ಪ್ರಾಧ್ಯಾಪಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


Saturday, June 21, 2025

ಶ್ರೀ ಗುರು ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜೀವನ, ದೂರದೃಷ್ಟಿ, ಪರಂಪರೆ ಕುರಿತ ಕಿರುಚಿತ್ರ "ಉಲ್ಲೋಚೆ ದೇವು" ಪ್ರದರ್ಶನ

ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ  ಸಾಹಿತ್ಯ - ಸಂಗೀತ - ಸಂಸ್ಕೃತಿ ಯನ್ನು ಪೋಷಿಸುವ ಎಸ್.ಜಿ.ಎಸ್.ಸಿ ಸಪ್ತಸ್ವರ ತಂಡದ ವತಿಯಿಂದ ಕಾಲೇಜಿನ ಪ್ರಾಧ್ಯಾಪಕರಿಗೆ, ಸಿಬ್ಬಂದಿಗಳಿಗೆ ಯುತ್ ಆಫ್ ಜಿ.ಎಸ್.ಬಿ ರವರು ಪ್ರಸ್ತುತ ಪಡಿಸಿದ ಶ್ರೀ ಗುರು ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜೀವನ, ದೂರದೃಷ್ಟಿ, ಪರಂಪರೆಯ ಕುರಿತಾದ ಕಿರುಚಿತ್ರ "ಉಲ್ಲೋಚೆ ದೇವು" ಇದರ ಪ್ರದರ್ಶನ ಜರುಗಿತು.






ಕಾಲೇಜಿನ ಇನ್ಫೋಸಿಸ್ ಫೌಂಡೇಶನ್ ಬ್ಲಾಕ್ ನ ಸೆಮಿನಾರ್ ಹಾಲ್ ನಲ್ಲಿ ಜರುಗಿದ ಚಿತ್ರ ಪ್ರದರ್ಶನ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಶ್ರೀನಾಥ ಪೈ ರವರು ಮಾತನಾಡಿ ಶ್ರೀ ಶ್ರೀ ಗಳ ಆಶೀರ್ವಾದ, ಚರಣಸ್ಪರ್ಶದಿಂದ ಕಾಲೇಜು ಕಂಡ ಅಭಿವೃದ್ದಿಯ ಬಗ್ಗೆ ತಿಳಿಸುತ್ತಾ, ಯೂತ್ ಆಫ್ ಜಿ.ಎಸ್.ಬಿ ರವರ ಕಾರ್ಯವನ್ನು ಪ್ರಶಂಶಿಸಿದರು. ಸಪ್ತಸ್ವರ ತಂಡದ ತರಬೇತುದಾರರಾದ ಶ್ರೀ ಕೃಷ್ಣ ಮೊಗೇರ ರವರು ವಂದನಾರ್ಪಣೆಗೈದರು.

Courtesy: https://youtu.be/SwV6WEmAgcs

ಅಂತಾರಾಷ್ಟ್ರೀಯ ಮಾದಕ ವಸ್ತು ವ್ಯಸನ ಅಕ್ರಮ ಸಾಗಾಣಿಕೆ ವಿರೋಧಿ ದಿನಾಚರಣೆ.

ಅಂತಾರಾಷ್ಟ್ರೀಯ ಮಾದಕ ವಸ್ತು ವ್ಯಸನ ಅಕ್ರಮ ಸಾಗಾಣಿಕೆ ವಿರೋಧಿ ದಿನಾಚರಣೆಯ ಪ್ರಯುಕ್ತ ಭಟ್ಕಳ ಶಹರ ಪೊಲೀಸ್‌ ಠಾಣಾ ವ್ಯಾಪ್ತಿಯ ಶ್ರೀ ಗುರು ಸುಧೀಂದ್ರ ಪದವಿ ಕಾಲೇಜಿಗೆ ಭಟ್ಕಳ ಶಹರ ಠಾಣೆಯ ಪಿಸ್.ಎಸ್.ಐ ಶ್ರೀ ರಾಠೋಡ್ ರವರು ಠಾಣಾ ಪೊಲೀಸ್ ಸಿಬ್ಬಂದಿ ಶ್ರೀ ದೀಪಕ ನಾಯ್ಕ ರವರೊಡಗೂಡಿ ಭೇಟಿ ನೀಡಿ ವಿದ್ಯಾರ್ಥಿಗಳಿಗೆ, ಮಹಿಳಾ ಮತ್ತು ಮಕ್ಕಳ ಸುರಕ್ಷತೆ,  ಪೋಕ್ಸೋ ಕಾಯ್ದೆ, ಮಾದಕ ವಸ್ತು ವ್ಯಸನದಿಂದ ಆಗುವ ದುಷ್ಪರಿಣಾಮಗಳು, ಸಂಚಾರಿ ನಿಯಮಗಳು, ಮಕ್ಕಳ ಸಹಾಯವಾಣಿ 1098, ಶರಾವತಿ ಪಡೆ ಮತ್ತು ನಿರ್ಭಯ ಪಡೆ. ಜನಸ್ನೇಹಿ ಪೊಲೀಸ್ ಠಾಣೆ.112, ಸೈಬರ್ ಕ್ರೈಂ ಬಗ್ಗೆ ತಿಳಿಸಿ, ಜಾಗೃತಿ ಮೂಡಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಶ್ರೀನಾಥ ಪೈ ರವರು ಮಾತನಾಡಿ ಅಪರಾಧ ಪ್ರಕರಣಗಳನ್ನು ತಡೆಯುವಲ್ಲಿ ಪೊಲೀಸ್ ಇಲಾಖೆಯವರ ಕಾರ್ಯವನ್ನು ಕೊಂಡಾಡುತ್ತಾ, ಸಂಚಾರಿ ನಿಯಮಗಳನ್ನು ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲಿಸಿ ಇಲಾಖೆಗೆ ಸರ್ವ ರೀತಿಯಿಂದ ಸಹಕರಿಸಬೇಕು ಎಂದರು. ಈ ಸಂದರ್ಭದಲ್ಲಿ ಕಾಲೇಜಿನ ಬಿ.ಕಾಂ ವಿಭಾಗದ ಉಪ ಪ್ರಾಂಶುಪಾಲರಾದ ಶ್ರೀ ಪಿಸ್.ಎಸ್.ಹೆಬ್ಬಾರ್, ಪ್ರಾಧ್ಯಾಪಕರು ಉಪಸ್ಥಿತರಿದ್ದರು. ಭಟ್ಕಳ ತಾಲೂಕಿನ ವಿಶೇಷ ಪ್ರಕರಣಗಳನ್ನು ಭೇದಿಸುವಲ್ಲಿ ವಿಶೇಷ ಕಾರ್ಯವನ್ನು ಮಾಡಿದ ಪೋಲಿಸ್ ತಂಡಕ್ಕೆ ಕರತಾಡನದ ಮೂಲಕ ಧನ್ಯವಾದ ಸಮರ್ಪಿಸಿ, ಅತಿಥಿಗಳಿಗೆ ಸ್ಮರಣಿಕೆಯನ್ನು ನೀಡಿದರು.





Thursday, June 12, 2025

ಸತತ ಪ್ರಯತ್ನದಿಂದ ಗುರಿಯನ್ನು ತಲುಪಬಹುದು ಗಣೇಶ ಭಟ್ಟ

ಭಟ್ಕಳ: ಭಟ್ಕಳ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ 2024-25ನೇ ಸಾಲಿನ ವಾರ್ಷಿಕೋತ್ಸವವು ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುಮಟಾದ ಸರ್ಕಾರಿ ಹನುಮಂತ ಬೆಣ್ಣೆ ಪದವಿಪೂರ್ವ ಕಾಲೇಜಿನ ಸಂಸ್ಕೃತ ಉಪನ್ಯಾಸಕರಾದ ಗಣೇಶ ಭಟ್ಟ " ಶೃದ್ಧೆಯಿಂದ ಸತತವಾಗಿ ಪ್ರಯತ್ನಿಸಿದಾಗ  ಯಾವುದೇ ಗುರಿಯನ್ನು ತಲುಪಬಹುದು, ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶ್ರಮಿಸಿ ಯಶಸ್ಸನ್ನು ಪಡೆಯಲಿ" ಎಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಖ್ಯಾತ ಯಕ್ಷಗಾನ ಕಲಾವಿದ ಹಾಗೂ ವೀರ ಚಂದ್ರಹಾಸ ಚಲನಚಿತ್ರದ ನಟರಾದ ಪ್ರಸನ್ನ ಶೆಟ್ಟಿಗಾರ ಮಾತನಾಡಿ "ಬದುಕಿನಲ್ಲಿ ಚಿಂತಿಸದೇ, ಬಂದ ಅವಕಾಶಗಳನ್ನು ಸ್ವೀಕರಿಸಿ ಹಾಗೂ ಆ ಕುರಿತು ಚಿಂತಿಸಿ, ಆಗಲೇ ಅತ್ಯುತ್ತಮ ಸಾಧನೆಗೈಯಲು ಸಾಧ್ಯ" ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಕುಮಟಾದ ರೆವೆನ್ಯೂ ಅಧಿಕಾರಿ, ಕಾಲೇಜಿನ ಬಿಎ ವಿಭಾಗದ ಪೂರ್ವ ವಿದ್ಯಾರ್ಥಿ ವೆಂಕಟೇಶ ಮಾತನಾಡಿ "ಕಾಲೇಜಿನಲ್ಲಿ ತಾವು ಕಳೆದ ದಿನಗಳನ್ನು ಸ್ಮರಿಸುತ್ತ, ತನ್ನ ಯಶಸ್ಸಿನಲ್ಲಿ ಕಾಲೇಜಿನ ಪಾತ್ರ ಬಹುಮುಖ್ಯ, ಕಾಲೇಜಿಗೆ ಸದಾ ಋಣಿಯಾಗಿರುವೆ" ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಭಟ್ಕಳ ಎಜುಕೇಶನ್ ಟ್ರಸ್ಟ'ನ ಅಧ್ಯಕ್ಷ ಡಾ. ಸುರೇಶ ನಾಯಕ "ಮೂರು ವರ್ಷದ ಪದವಿಯಲ್ಲಿ ಕೌಶಲ್ಯವನ್ನು ವೃದ್ಧಿಸಿಕೊಂಡು ಉದ್ಯೋಗವಂತರಾಗಬೇಕು" ಎಂದು ಹೇಳಿದರು.

ಭಟ್ಕಳ ಎಜುಕೇಶನ್ ಟ್ರಸ್ಟ'ನ  ಟ್ರಸ್ಟಿ ನಾಗೇಶ ಭಟ್ಟ ಇವರು ಬಿಎ ಪತ್ರಿಕೋದ್ಯಮ ವಿಭಾಗದವರು ರಚಿಸಿದ ಎಸ್.ಜಿ.ಎಸ್ ಸಮೃದ್ಧಿ ಪತ್ರಿಕೆಯ ೩ನೇ ಸಂಚಿಕೆಯನ್ನು ಆನಾವರಣಗೊಳಿಸಿದರು.

೨೦೨೪-೨೫ನೇ ಸಾಲಿನ ವಿವಿಧ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಪಠ್ಯ ಪಠ್ಯೇತರ, ಕ್ರೀಡಾ ಚಟುವಟಿಕೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಪ್ರಾಂಶುಪಾಲರಾದ ಶ್ರೀನಾಥ ಪೈ ಎಲ್ಲರನ್ನೂ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು. ಮುಖ್ಯ ಅತಿಥಿಗಳನ್ನು ಬಿ.ಕಾಂ ವಿಭಾಗದ ಉಪಪ್ರಾಂಶುಪಾಲ ಪಿ.ಎಸ್. ಹೆಬ್ಬಾರ್ ಹಾಗೂ ಬಿ.ಬಿ.ಎ-ಬಿ.ಎ ವಿಭಾಗದ ಉಪಪ್ರಾಂಶುಪಾಲ ವಿಶ್ವನಾಥ ಭಟ್ಟ ಪರಿಚಯಿಸಿದರೆ, ಉಪನ್ಯಾಸಕ ಸುಬ್ರಮ್ಹಣ್ಯ ನಾಯ್ಕ ವಂದಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದ ದಿಕ್ಸಿತಾ ಹಾಗೂ  ನೇಹಾ ನಿರೂಪಿಸಿದರು. ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಜರುಗಿದವು.

Monday, May 5, 2025

ನೆದರ್ಲ್ಯಾಂಡ್'ನ ಮ್ಯಾಚ್ ಸ್ಟ್ರೀಚ್ ವಿಶ್ವವಿದ್ಯಾಲಯದ ಸಂಪನ್ಮೂಲ ವಿದ್ಯಾರ್ಥಿಗಳ ಸಮಾಗಮ ಕಾರ್ಯಕ್ರಮ


ಭಟ್ಕಳ: ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ನೆದರ್ಲ್ಯಾಂಡ್'ನ ಮ್ಯಾಚ್ ಸ್ಟ್ರೀಚ್ ವಿಶ್ವವಿದ್ಯಾಲಯದ ಸಂಪನ್ಮೂಲ ವಿದ್ಯಾರ್ಥಿಗಳ ಸಮಾಗಮ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನೈಜೀರಿಯಾ ಮೂಲದ ಅಮೀರಾ ಮುಸ್ತಫಾ ಹಾಗೂ ಲಕ್ಸಂಬರ್ಗ್ ಮೂಲದ ರೀನಾ ಮರಿನಾ ರವರು ನೆದರ್ಲ್ಯಾಂಡ್'ನ ಶಿಕ್ಷಣ ಕ್ರಮ ಹಾಗೂ ವಿಶ್ವವಿದ್ಯಾಲಯದಲ್ಲಿ ಇರುವಂತಹ ವಿವಿಧ ಅವಕಾಶಗಳ ಬಗ್ಗೆ ವಿಸ್ತೃತವಾಗಿ ವಿವರಿಸಿದರು.


ಈ ಸಂದರ್ಭದಲ್ಲಿ ನೆದರ್ಲ್ಯಾಂಡ್'ನಲ್ಲಿ ಅಧ್ಯಯನ ಮಾಡುತ್ತಿರುವ ಭಾರತದ ಡಾ. ಪ್ರಿನ್ಸಿಟಾ ಅವರು ಭಾರತೀಯ ಶಿಕ್ಷಣ ಪದ್ಧತಿ ಹಾಗೂ ನೆದರ್ಲ್ಯಾಂಡ್'ನ ಶಿಕ್ಷಣ ಪದ್ಧತಿಯ ಸಾಮ್ಯತೆ-ವ್ಯತ್ಯಾಸವನ್ನು ತಿಳಿಸುತ್ತಾ ವಿವಿಧ ಅವಕಾಶಗಳ ಬಗ್ಗೆ ವಿಸ್ತೃತವಾಗಿ ಮಾಹಿತಿಯನ್ನು ನೀಡಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಭಟ್ಕಳ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ. ಸುರೇಶ್ ನಾಯಕ ರವರು ಮಾತನಾಡಿ ಇದೊಂದು ವಿಶೇಷ ಹಾಗೂ ಅಪರೂಪದ ಕಾರ್ಯಕ್ರಮ, ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಉಪಯೋಗವನ್ನು ಪಡೆದುಕೊಂಡು ಹೆಚ್ಚಿನ ಜ್ಞಾನವನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.

ಶ್ರೀ ಗುರು ಸುಧೀಂದ್ರ ಕಾಲೇಜಿನ ಪ್ರಾಂಶುಪಾಲ ಶ್ರೀನಾಥ್ ಪೈ ಎಲ್ಲರನ್ನು ಸ್ವಾಗತಿಸಿದರು, ಟ್ರಸ್ಟಿ ನಾಗೇಶ್ ಭಟ್ಟ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಈ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು. ಕಾಲೇಜಿನ ವಿದ್ಯಾರ್ಥಿಗಳು ನಮ್ಮ ದೇಶ, ರಾಜ್ಯ, ಕರಾವಳಿ ಕರ್ನಾಟಕದ ಬಗ್ಗೆ, "ಸಿಲಿಕಾನ್ ಬ್ಲೂ ಆಫ್ ಇಂಡಿಯಾ" ಮಂಗಳೂರು ಕ್ಲಸ್ಟರ್ ನ ಉತ್ತರ ಕನ್ನಡ ಜಿಲ್ಲೆಯ ಶ್ರೀ ಗುರು ಸುಧೀಂದ್ರ ಕಾಲೇಜಿನ ಹಿನ್ನೋಟ ಹಾಗೂ ಸಾಧಿಸಿದ ಮೈಲುಗಲ್ಲಿನ ಕುರಿತು ವಿಶೇಷ ಪ್ರಸ್ತುತಿಯನ್ನು ಸಾದರ ಪಡಿಸಿದರು.  

ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ ಹಾಗೂ ನೆದರ್ಲ್ಯಾಂಡ್ ಮ್ಯಾಚ್ ಸ್ಟ್ರೀಚ್ ವಿಶ್ವವಿದ್ಯಾಲಯದ ಪರಸ್ಪರ ಜ್ಞಾನ ಮಂಥನಕ್ಕೆ ಕಾರಣವಾಗಿ, ಭವಿಷ್ಯದಲ್ಲಿ ಹೊಸ ಅವಕಾಶಗಳನ್ನು ಸಾಕ್ಷೀಕರಿಸಿದ್ದು ವಿಶೇಷವಾಗಿತ್ತು.